ಬಕೆಟ್ ಪ್ರಶಸ್ತಿ ಪ್ರದಾನ ಸಂಪನ್ನ!

ಇತ್ತೀಚಿನ ದಿನಗಳಲ್ಲಿ ಯೂಸ್ ಲೆಸ್ ಫೆಲೋಸ್ ಗಳಿಗೆ ಪ್ರಶಸ್ತಿ ಹುಚ್ಚು ಜೋರಾಗಿದೆ. ಏನೂ ಮಾಡದೆ, ಯಾವುದೇ ಅರ್ಹತೆಗಳಿಲ್ಲದೆ, ಯೋಗ್ಯತೆಯೂ ಇಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಚಿಲ್ಲರೆ ಮಾಡಿಕೊಂಡ ಮಹನೀಯರುಗಳು ಬಕೆಟ್ ಪ್ರಶಸ್ತಿಗಳಿಗಾಗಿ ಬಕೆಟ್ ಹಿಡಿಯುತ್ತಿರುವುದು ನೋಡಿದರೆ ನಗೆಯು ಬರುತಿದೆ. ಕೇವಲ ಒಂದು ಕೆ.ಜಿ ಹಣ್ಣು ಹಂಪಲು, ಒಂದು ರಿಡಕ್ಷನ್ ಸೇಲಿನ ಜರಿ ಶಾಲು, ಮೈಸೂರು ಮಾರಾಜರ ಪೇಟಾ ಥರಹದ ಒಂದು ಟೋಪಿ, ಐವತ್ರೂಪಾಯಿ ಮಾಲೆ ಮತ್ತು ಒಂದು ಪೊಟ್ಟು ಪ್ರಶಸ್ತಿ ಫಲಕಕ್ಕಾಗಿ ಇಷ್ಟೆಲ್ಲಾ ನೂಕು ನುಗ್ಗಲು ಯಾಕೆ ಅಂತ? ಅದನ್ನು ಹಿಡಿದು ಕುಳಿತು ಕ್ಯಾಮೆರಾಗಳಿಗೆ ಫೋಸ್ ಕೊಟ್ಟಿದ್ದು ನೋಡಿದ್ರೆ ಇದೇನು ನೊಬೆಲ್ಲೋ ಅಥವಾ ಭಾರದ ರತ್ನವೋ ಎಂಬಂತಿತ್ತು. ನಮ್ಮ ಪ್ರಶಸ್ತಿಗಳಿಗೆ ರಜನೀಕಾಂತನ ಮ್ಯಾಟಿನಿ ಟಿಕೆಟ್ ಬೆಲೆಯೂ ಇಲ್ಲದಂತಾಗಿದ್ದು ವಿಪರ್ಯಾಸವೇ ಸರಿ. ರಜನೀಕಾಂತನ ಮ್ಯಾಟಿನಿ ಟಿಕೆಟು ಕೂಡ ಅಷ್ಟು ಸುಲಭದಲ್ಲಿ ಕಾಳ ಸಂತೆಯಲ್ಲೂ ಸಿಗಲ್ಲ. ಆದರೆ ನಮ್ಮ ಪ್ರಶಸ್ತಿಗಳು ಯಾರಿಗೆ ಬೇಕಾದರೂ ಸಿಕ್ಕಿಯೇ ಸಿಗುತ್ತದೆ. ಆದರೆ ಸಂಬಂಧ ಪಟ್ಟವರಿಗೆ ಬಕೆಟ್ ಹಿಡಿಯಬೇಕು ಅಷ್ಟೇ. ಬಟ್ಟೆ ಒಗೆಯುವ ದೊಡ್ಡ ಬಕೆಟ್ ಹಿಡಿದರೆ ರಾಜ್ಯ ಪ್ರಶಸ್ತಿ, ಮನೆ ಕ್ಲೀನಿಂಗ್ ಮಾಡುವ ಹದ ಬಕೆಟ್ ಹಿಡಿದರೆ ಜಿಲ್ಲಾ ಪ್ರಶಸ್ತಿ ಮತ್ತು ಟಾಯ್ಲೆಟ್ ಒಳಗೆ ಯೂಸ್ ಮಾಡುವ ಚಿಕ್ಕ ಬಕೆಟ್ ಹಿಡಿದರೆ ತಾಲೂಕು ಮಟ್ಟದ ಪ್ರಶಸ್ತಿ. ಇವೆಲ್ಲ ಹಾಗೆ ಸುಮ್ಮನೆ ಪ್ರಶಸ್ತಿಗಳು.

ಹಾಗೆಂದು ನಮ್ಮ ಪ್ರಶಸ್ತಿಗಳನ್ನು ಯಾರಿಗೆ, ಯಾಕೆ ಕೊಡಬೇಕೆಂದು ಕೊಡುವವರಿಗೂ ಗೊತ್ತಿಲ್ಲ, ತಗೊಳ್ಳುವವರಿಗೂ ಗೊತ್ತಿರುವುದಿಲ್ಲ. ಅಲ್ಲೊಂದು ಅನಾಥ ಶವ ಬಿದ್ದಿದೆ, ವಾಸನೆ ತಡೆಯೊಕ್ಕಾಗಲ್ಲ, ಪುರಿ ಆಗಿದೆ, ನರಿನಾಯಿಗಳು ಚಪ್ಪರಿಸುತ್ತಿದೆ ಅದನ್ನು ಎತ್ತಿ ಅದರ ಅಂತ್ಯ ಸಂಸ್ಕಾರಕ್ಕೆ ಸಹಕರಿಸಿದರೆ ತಾಲೂಕು ಸಮಾಜ ಸೇವೆ ಪ್ರಶಸ್ತಿ. ಎರಡು ಶವ ಎತ್ತಿದರೆ ಸಮಾಜ ಸೇವೆಯಲ್ಲಿ ಜಿಲ್ಲಾ ಪ್ರಶಸ್ತಿ . ಎರಡು ಗಡಂಗ್, ಒಂದು ಗೂಡಂಗಡಿ, ಒಂದು ಮರ ಕಟ್ಟಿಂಗ್ ಮೆಷಿನ್, ಮತ್ತೊಂದು ಹುಲ್ಲು ಪೆರೆಯುವ ಮೆಷಿನ್ ಇದ್ದರೆ ತಾಲೂಕು ಉದ್ಯಮಿ ಪ್ರಶಸ್ತಿ. ಒಂದು ಕೊರಗ್ಗಜ್ಜನ ಕಟ್ಟೆ ಮತ್ತು ಚೌತಿಗೆ ಚಂದಾ ಎತ್ತಿ ಒಂದು ಗಣಪ ಇಟ್ಟರೆ ಧಾರ್ಮಿಕ ವಿಭಾಗದ ತಾಲೂಕು ಪ್ರಶಸ್ತಿ. ಕಲೆಕ್ಷನ್ ಮಾಡಿ ಕ್ರಿಕೆಟ್, ಕಬಡ್ಡಿ ಟೂರ್ನಮೆಂಟ್ ಮಾಡಿದವನನ್ನು ಕ್ರೀಡಾ ಕ್ಷೇತ್ರದ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಗ್ಯಾಸ್ಟ್ರಿಕ್ ಗೆ ಕೊತ್ತಂಬರಿ ಜೀರಿಗೆ ಕಷಾಯ ಕೊಟ್ಟವನಿಗೆ, ವಿವಿಧ ಸೊಪ್ಪು, ಬೇರು ತಂದು ಕಷಾಯ ಕೊಟ್ಟು ಕಿಡ್ನಿ ಫೈಲ್ಯೂರ್ ಮಾಡುವವನಿಗೆ ಆಯುರ್ವೇದಿಕ್ ತಾಲೂಕು ಪ್ರಶಸ್ತಿ, ಯಾವುದೋ ಅಂಡಮಾನಿನ ಕುಷ್ಠ ರೋಗಿ ರಸ್ತೆ ಬಗ್ಗೆ ಎರಡಕ್ಷರ ಬರೆದರೆ ಗ್ರಾಮೀಣ ಪತ್ರಿಕೋದ್ಯಮದ ಪ್ರಶಸ್ತಿ, ಇಂಗ್ಲೀಷ್ ಮೀಡಿಯಂ ಸ್ಕೂಲು ಮಾಡಿ ವಿದ್ಯಾರ್ಥಿಗಳ ಹೆತ್ತವರನ್ನು ಬೋಳಿಸುವವನಿಗೆ ಶಿಕ್ಷಣ ಕ್ಷೇತ್ರದ ಸಾಧನಾ ಶೀಲಾ ಪ್ರಶಸ್ತಿ, ಭೂತಕ್ಕೆ ಪಾರಿ ಹೇಳುವವನಿಗೆ ಪ್ರಶಸ್ತಿ, ಭೂತ ಕಟ್ಟಿದ್ದಕ್ಕೆ ಪ್ರಶಸ್ತಿ, ವಾಲಗ ಊದಿದವನಿಗೆ ಪ್ರಶಸ್ತಿ, ಕೊಂಬು ಕಹಳೆಯವನಿಗೆ ಪ್ರಶಸ್ತಿ, ದೇವರನ್ನು ಹೊತ್ತವನಿಗೆ ಪ್ರಶಸ್ತಿ, ಪೂಜೆ ಮಾಡಿದ್ದಕ್ಕೆ ಪ್ರಶಸ್ತಿ, ಯಕ್ಷಗಾನದಲ್ಲಿ ಧಿಗಿಣ ಹಾಕಿದವನಿಗೆ, ಚೆಂಡೆಯವನಿಗೆ, ಭಾಗವತನಿಗೆ ಪ್ರಶಸ್ತಿ, ಕೊನೆಗೆ ಮಾರ್ನೆಮಿ ದಿನಗಳಲ್ಲಿ ಹುಲಿ ವೇಷ ಹಾಕಿ ಕುಣಿದವನಿಗೂ ಪ್ರಶಸ್ತಿ.

ಹಾಗೆಂದು ನಮ್ಮ ಪ್ರಶಸ್ತಿ ಪಟ್ಟಿಗಳಲ್ಲಿ ಅನರ್ಹರು ಜಾಸ್ತಿಯಾದಂತೆ ವಿಭಾಗಗಳೂ ಜಾಸ್ತಿಯಾಗಿವೆ. ಒಂದೊಂದು ವಿಭಾಗವೂ ಮತ್ತೇ ನಾಲ್ಕೈದು ಉಪ ವಿಭಾಗಗಳಾಗಿವೆ. ಉದಾಹರಣೆಗೆ ವೈದ್ಯಕೀಯ ಕ್ಷೇತ್ರವನ್ನು ಮೂರು ತುಂಡು ಮಾಡಿ ಇಂಗ್ಲೀಷ್ ಡಾಕ್ಟರ್, ಆಯುರ್ವೇದ ಡಾಕ್ಟರ್, ಕಷಾಯ ಡಾಕ್ಟರ್ ಎಂದು ಪ್ರಶಸ್ತಿ ಕೊಡಲಾಗುತ್ತಿದೆ. ಇನ್ನು ಧಾರ್ಮಿಕ ವಿಭಾಗದಲ್ಲಿ ದೇವತಾರಾಧನೆ,ದೈವಾರಾಧನೆ ಮುಂತಾದ ವಿಭಾಗಗಳಿವೆ. ಅದರಲ್ಲೂ ದೈವಾರಾಧನೆಯಲ್ಲಿ ಎಲ್ಲರಿಗೂ ಪ್ರಶಸ್ತಿ ಕೊಟ್ಟಾಗಿದೆ. ಇನ್ನು ಕತ್ತಲೆಯಲ್ಲಿ ನಿಂತು ಭೂತಕ್ಕೆ ಗರ್ನಲ್ ಬಿಸಾಡುವವನಿಗೆ ಒಂದು ಜಿಲ್ಲಾ ಪ್ರಶಸ್ತಿ ಕೊಟ್ಟರೆ ಮುಗೀತು ಅವನ ಮೇಲೂ ಬೆಳಕು ಚೆಲ್ಲಿದಂತಾಗುತ್ತದೆ. ಇನ್ನು ಆ ಪತ್ರಿಕೋದ್ಯಮದಲ್ಲಿ ಗ್ರಾಮೀಣ, ಗಡಿನಾಡು, ಪೇಟೆ ಪತ್ರಕರ್ತರು ಎಂದೆಲ್ಲಾ ವಿಭಾಗಗಳಿವೆ. ಇನ್ನು ಸಮಾಜ ಸೇವೆ ವಿಭಾಗದಲ್ಲಿ ತುಂಬಾ ಬಕೆಟ್ ಗಳಿರುತ್ತವೆ. ಈ ಪ್ರಶಸ್ತಿ ಹುಚ್ಚು ಎಲ್ಲಿ ತನಕ ಮುಟ್ಟಿದೆ ಅಂದರೆ ಈ ಸಲ ತಾಲೂಕಿನಲ್ಲಿ ಶಾಲು ಹೊದೆಸಿಕೊಂಡವನು ಮುಂದಿನ ವರ್ಷ ದೊಡ್ಡ ಬಕೆಟ್ ಹಿಡಕ್ಕೊಂಡು ಜಿಲ್ಲಾ ಪ್ರಶಸ್ತಿಗೆ ಪ್ರಯತ್ನಿಸುವುದು ಮಾಮೂಲಾಗಿದೆ. ಶೂನ್ಯ ಸಂಪಾದನೆಯ ಕಿರೀಟಕ್ಕೆ ಪ್ರಶಸ್ತಿಗಳ ಗರಿ ಯಾಕೆ ಮಾರಾಯ್ರೆ.

ಹಾಗೆಂದು ಪ್ರಶಸ್ತಿಗಳ ಹುಚ್ಚು ಹಿಡಿದವರು ದುಡ್ಡು ಖರ್ಚು ಮಾಡಲು ಹಿಂದೆ ಮುಂದೆ ನೋಡಲ್ಲ. ಒಂದು ಪೊಕ್ಕಡೆ ಡಾಕ್ಟರೇಟ್ ಪಡೆಯಲು ಕೂಡ ಲಕ್ಷಾಂತರ ಮುಗಿಸುವ ಅನರ್ಹರೂ ಇದ್ದಾರೆ. ಇದೀಗ ಡಾಕ್ಟರೇಟ್ ಮಾರ್ಕೇಟ್ ಕೂಡ ಇಪ್ಪತ್ತೈದು ಸಾವಿರಕ್ಕೆ ಇಳಿದಿದ್ದು ಇಪ್ಪತ್ತೈದು ಕೊಟ್ಟು ಕೋಟು ಹಾಕಿಕೊಂಡು ಒಂದು ಫೋಟೋ ಫೋಸ್ ಕೊಟ್ಟರೆ ನೀವೂ ಡಾಕ್ಟರ್ ಚೋಂಕ್ರ ಆಗಬಹುದು. ಈ ಸಲ ಕೆಲವು ಪೊಕ್ಕಡೆ ಡಾಕ್ಟರೇಟ್ ಪಡೆದವರೂ ಜಿಲ್ಲಾ ಪ್ರಶಸ್ತಿಗೆ ಬಟ್ಟೆ ಒಗೆಯುವ ಬಕೆಟ್ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ವರ್ಷಕ್ಕೊಮ್ಮೆ ಬರುವ ಈ ಪೊಕ್ಕಡೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸರ್ಕಾರ ಇನ್ನಾದರೂ ಬಕೆಟ್ ಸಾಧಕರ ಪಟ್ಟಿಯನ್ನು ನಿರ್ದಾಕ್ಷಿಣ್ಯವಾಗಿ ಕಸದ ಬುಟ್ಟಿಗೆ ಹಾಕಲೇ ಬೇಕಾಗಿದೆ. ಯಾಕೆಂದರೆ ಈ ಸಲವೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದಾಜು 173 ಮಂದಿಗೆ ಪ್ರಶಸ್ತಿ ನೀಡಲಾಗಿದೆ. ಈ ಪಟ್ಟಿ ಇನ್ನು ಬೆಳೆಯುತ್ತಾ, ಬೆಳೆಯುತ್ತಾ ಹೋದರೆ ಮುಂದೊಂದು ದಿನ ಬಜ್ಜೆಯಿ ತೆಗೆಯುವವನನ್ನು ಮತ್ತು ತೋಟಕ್ಕೆ ಮದ್ದು ಬಿಡುವವನನ್ನು ಸಾಹಸಮಯ ಸಮಾಜ ಸೇವೆ ವಿಭಾಗಕ್ಕೆ ಹಾಕುವ ಅಪಾಯಗಳಿವೆ. ಕೋಳಿ ಅಂಕ ಜಾನಪದ ಕ್ರೀಡೆಯಾಗಿ, ಗೇರು ಹಣ್ಣಿನ ಗಂಗಸರ ಭಟ್ಟಿ ಇಳಿಸುವುದು ಗ್ರಾಮೀಣ ಕೃಷಿ ಆವಿಷ್ಕಾರ ವಿಭಾಗದಲ್ಲಿ ಬಂದು ಬಿಡುತ್ತದೆ. ಒಂದು ಸಾಧನೆ ಮಾಡುವ ಸಾಧಕನಿಗೆ ಸ್ವಾರ್ಥ ಇರಬಾರದು, ಅವನ ಸಾಧನೆ ಜನರಿಗೆ ಉಪಕಾರಿಯಾಗಿರಬೇಕು, ಸಮಾಜಕ್ಕೆ ಮಾರ್ಗದರ್ಶಿಯಾಗಿರಬೇಕು. ಸಾಧಕ ಪ್ರಶಸ್ತಿಗಾಗಿ ಹುಡುಕಾಟ ಮಾಡಬಾರದು ಬದಲಾಗಿ ಪ್ರಶಸ್ತಿಯೇ ಅವನನ್ನು ಹುಡುಕಿಕೊಂಡು ಬರಬೇಕು. ಸಾಧಕ ದುಡ್ಡಿಗಾಗಿ ಸಾಧನೆ ಮಾಡಬಾರದು ಬದಲಾಗಿ ಸಮಾಜದ ಉನ್ನತಿಗಾಗಿ ಸಾಧನೆ ಮಾಡಬೇಕು. ಸಾಧಕನ ಸಾಧನೆಗಳು ಸಮಾಜಕ್ಕೆ ಹೊರೆಯಾಗಬಾರದು ಮತ್ತು ಸಾಧಕ ತನ್ನ ಸಾಧನೆಗಳಿಗೆ ರೇಟ್ ಫಿಕ್ಸ್ ಮಾಡಬಾರದು. ಆದರೆ ಈಗ ನಡೆಯುತ್ತಿರುವುದು ಏನು? ಲಕ್ಷಗಟ್ಟಲೆ ಫೀಸು ತಗೊಂಡು ವಿದ್ಯಾ ಸಂಸ್ಥೆ ನಡೆಸುವವನು ವಿದ್ಯಾದಾನಿಯಾಗುತ್ತಾನೆ ಮತ್ತು ಅವನಿಗೆ ಶಿಕ್ಷಣ ಕ್ಷೇತ್ರದ ಮಹಾನ್ ಕೆಲಸಕ್ಕಾಗಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹಾಗಾದರೆ ಇದು ಎಂಥಾ ಅಂತ? ದುಡ್ಡು ತಗೊಂಡು ಕೆಲಸ ಮಾಡುವವನದ್ದು ಏನು ಸಾಧನೆ? ಅದು ಅವರವರ ಹೊಟ್ಟೆ ಪಾಡು, ಉದ್ಯೋಗ. ಅದಕ್ಕೆ ಪ್ರಶಸ್ತಿ ಕೊಡಬೇಕಾ? ತಮ್ಮ ತಮ್ಮ ಉದ್ಯೋಗ, ಕುಲಕಸುಬು, ವ್ಯಾಪಾರ ವಹಿವಾಟು ಮಾಡಿದ್ದಕ್ಕೆ ಯಾಕೆ ಹಣ್ಣು ಹಂಪಲು, ಸಿಲ್ಕ್ ಶಾಲು, ಮೈಸೂರು ಪೇಟಾ?

ಯುವರ್ ಆನರ್,
ಪ್ರಜಾಪ್ರಭುತ್ವದ ಪ್ರಶಸ್ತಿಗಳ ಮೌಲ್ಯಗಳು ಕುಸಿದು ಪಾತಾಳ ಮುಟ್ಟಿದೆ. ಪ್ರಶಸ್ತಿಗಾಗಿ ಅರ್ಹರು ಮತ್ತು ಅನರ್ಹರ ಸ್ಪರ್ಧೆಯಲ್ಲಿ ಅರ್ಹರು ಸೈಲೆಂಟಾಗಿ ಸೈಡಿಗೆ ಹೋಗುತ್ತಿದ್ದಾರೆ. ಕೊಂಬು ಕಹಳೆಯೊಂದಿಗೆ ಅನರ್ಹರ ಮೆರವಣಿಗೆ ರಾಜಾರೋಷವಾಗಿ ನಡೆಯುತ್ತಿದೆ. ಪ್ರಶಸ್ತಿ ಪ್ರದಾನ ಅಂದರೆ ಅದು ಹಕ್ಕು ಪತ್ರ ವಿತರಣೆ ಅಲ್ಲ, ಪ್ರಶಸ್ತಿ ವಿಜೇತರು ಬಸವ ವಸತಿ ಫಲಾನುಭವಿಗಳೂ ಅಲ್ಲ. ಪ್ರಶಸ್ತಿಗಳು ಅಂದರೆ ಡಿಗ್ರಿ ಸರ್ಟಿಫಿಕೇಟಿನ ಹಾಗಿರಬೇಕು. ಉನ್ನತ ವ್ಯಾಸಂಗಗಳ ಡಾಕ್ಟರೇಟ್ ನಂತಿರಬೇಕು. ಪ್ರಶಸ್ತಿಗಳ ಆಯ್ಕೆಯ ಮಾನದಂಡವೇ ಸರಿ ಇಲ್ಲ. ಅದು ತುಕ್ಕು ಹಿಡಿದಿದೆ. ಕಾಟಾಚಾರದ ಪ್ರಶಸ್ತಿಗಳು, ಓಲೈಕೆ ಪ್ರಶಸ್ತಿಗಳನ್ನು ಗುಜಿರಿಗೆ ಹಾಕಬೇಕಾಗಿದೆ. ಈ ಪ್ರಕ್ರಿಯೆಗಳು ಹೀಗೆ ಮುಂದುವರೆದರೆ ಪ್ರಶಸ್ತಿಗಳು ಕೂಡ ಅನರ್ಹರಿಂದ ಅನರ್ಹರಿಗಾಗಿ ಅನರ್ಹರದೇ ಎಂಬಂತಾಗುತ್ತದೆ. ಪ್ರಶಸ್ತಿಗಳು ಯಾಕೆ ಎಂದು ಕೊಡುವವರು ಮತ್ತು ತಗೊಳ್ಳುವವರು ಅರ್ಥ ಮಾಡಿಕೊಂಡರೆ ಅಷ್ಟೇ ಸಾಕು.

Leave a Comment

Your email address will not be published. Required fields are marked *

Home
Get Updates
Contact
Search
Scroll to Top